	ಮಹಾರಾಷ್ಟ್ರೀ 		
ಇಂಡೊ-ಆರ್ಯನ್ ಭಾಷಾಪರಿವಾರಕ್ಕೆ ಸೇರಿದ ಪ್ರಾಕೃತ ಭಾಷಾಪ್ರಭೇದಗಳ ಪೈಕಿ ಒಂದು. ಇವರ ಮುಖ್ಯ ಲಕ್ಷಣಗಳಿವು. 1 ಅ ಮತ್ತು ವ ಧ್ವನಿಗಳ ವಿಶೇಷ ಬಳಕೆ, ನಗರ>ನಅರ, ಉದರ>ಉವರ; 2 ವ ಧ್ವನಿ ಮ ಎಂಬುದಾಗಿ ಹೆಚ್ಚಾಗಿ ಪರಿವರ್ತನೆಗೊಳ್ಳುತ್ತದೆ. ತಾವ>ತಾಮ. ಏವ>ಏಮ; 3 ಸಂಯುಕ್ತ ವ್ಯಂಜನಗಳು ಸರಳ ವ್ಯಂಜನಗಳಾಗುತ್ತವೆ. ಸಮ್ಮೂಹ > ಸಮೂಹ, ಅನ್ನ > ಅನ. 4. ದ್ವಿತೀಯಾ ವಿಭಕ್ತಿ ಸ್ಥಾನದಲ್ಲಿ ಪ್ರಥಮಾ ವಿಭಕ್ತಿಯನ್ನೂ ಸಪ್ತಮೀ ವಿಭಕ್ತಿಯ ಬಹುವಚನದ ಸ್ಥಾನದಲ್ಲಿ ತೃತೀಯಾ ವಿಭಕ್ತಿಯ ಬಹುವಚನವನ್ನೂ ಬಳಸಬಹುದಾದ ಅವಕಾಶಗಳುಂಟು; 5 ಆಕಾರಾಂತ ಮತ್ತು ಈ ಕಾರಂತ ಸ್ತ್ರೀ ಲಿಂಗನಾಮಪದಗಳ ಅಂತ್ಯಸ್ವರಗಳು ಪುರಷವಾಚಕ ಏಕವಚನರೂಪದಲ್ಲಿ ತಿ ಎಂಬುದು ಇ ಎಂದಾಗುತ್ತದೆ. ಹಸತಿ > ಹಸಇ; 7 ಈ ಪ್ರಭೇದಗಳಲ್ಲಿ ಸಂಸ್ಕøತ ವ್ಯಂಜನಗಳ ಸ್ವೀಕಾರ ಹೆಚ್ಚಾಗಿ ನಡೆದಿಲ್ಲ. ಆದ್ದರಿಂದ ಪ್ರಾಕೃತ್ಯದ ಒಂದು ಶಬ್ಧ ಅಥವಾ ಪದ ಸಂಸ್ಕøತದ ಅನೇಕ ಶಬ್ದಾರ್ಥಗಳನ್ನು ಪಡೆದಿದೆ.

ಮಹಾರಾಷ್ಟ್ರೀ

ಸಂಸ್ಕøತ

ಅರ್ಥ

ಕಾಅ
...
ಕಾಕ
...
ಕಾಯ, ಕಾಚ

ಮಅ
...
ಮತ
...
ಮದ, ಮಯ, ಮಗ

	ಈ ಪ್ರಭೇದ, ಪ್ರಾಕೃತದ ಇತರ ಎಲ್ಲ ಪ್ರಭೇದಗಳಿಗಿಂತ ಶ್ರೇಷ್ಠವಾದುದೆಂದು ದಂಡಿ ತನ್ನ ಕಾವ್ಯಾದರ್ಶ ಎಂಬ ಕೃತಿಯಲ್ಲಿ ಹೇಳಿದ್ದಾನೆ. ಭಾರತೀಯ ವ್ಯಾಕರಣಕಾರರ ಪೈಕಿ ಅನೇಕರು ತಮ್ಮ ಪ್ರಾಕೃತ ವ್ಯಾಕಾರಣಗಳಲ್ಲಿ ಈ ಪ್ರಭೇದವನ್ನೇ ಮೊದಲು ವಿವರಿಸಿದ್ದಾರೆ. ಇದಕ್ಕಾಗಿಯೇ ಹೆಚ್ಚು ಸೂತ್ರಗಳನ್ನು ಮೀಸಲಿರಿಸಿದ್ದಾರೆ. ವರರುಚಿ ಈ ಪ್ರಭೇದದ ವ್ಯಾಕರಣವನ್ನು 9 ಅಧ್ಯಾಯ, 425 ಸೂತ್ರಗಳಲ್ಲಿ ವಿವರಿಸಿದ್ದಾನೆ. ಉಳಿದ ಪ್ರಭೇದಗಳನ್ನು ಒಂದೊಂದು ಅಧ್ಯಾಯದಲ್ಲಿ ಹೇಳಿದ್ದಾನೆ. ಈತನ ತರುವಾಯದ ವ್ಯಾಕರಣಕಾರರೂ ಇವನನ್ನೇ ಅನುಸರಿಸಿದ್ದಾರೆ.

	ಹಾಲಕವಿಯ ಸತ್ತಸಯಿ (ಗಾಥಾಸಪ್ತಶತಿ). ಜಯವಲ್ಲಭನ ವಜ್ಜಾಲಗ್ಗ ಪ್ರವರಸೇನನ ರಾವಣವಹೋ, ವಾಕ್ಪತಿಯ ಗಉಡವಹೋ (ಗೌಡವಧ), ರಾಮಪಾಣಿವಾದನ ಕಂಸವಹೋ, ಕುತೂಹಲ ಕವಿಯ ಲೀಲಾವಈ ಎಂಬವು ಈ ಪ್ರಭೇದದಲ್ಲಿಯ ಮಹತ್ತ್ವದ ಕೃತಿಗಳು. ಇವುಗಳ ಪೈಕಿ ಲೀಲಾವಈ ಒಂದು ಸುಂದರ ಕಾವ್ಯ. ಇದು ಸಾತವಾಹನ ಮತ್ತು ಸಿಂಹಳಕನ್ನೆಯಾದ ಲೀಲಾವತಿ ವಿಷಯಕವಾದ ಪ್ರೇಮ ಕಥೆ. ಭಾವಪೂರ್ಣವಾಗಿಯೂ ರಸಯುಕ್ತವಾಗಿಯೂ ಇರುವ ಈ ಕಾವ್ಯವನ್ನು ವೈಯಾಕರಣ ಲಕ್ಷಣಗಳಿಗೆ ಲಕ್ಷ್ಯವಾಗಿ ಉಪಯೋಗಿಸಿಕೊಳ್ಳಲಾಗಿದೆ. ಅಲ್ಲದೆ ಕಾಳಿದಾಸನ ತರುವಾಯದ ನಾಟಕಕಾರರು ತಮ್ಮ ನಾಟಕಗಳಲ್ಲಿ ಪದ್ಯಗಳನ್ನು ರಚಿಸುವಾಗಿ ಈ ಪ್ರಭೇದವನ್ನೇ ಬಳಸಿದ್ದಾರೆ.

	ಶ್ವೇತಾಂಬರ ಜೈನರ ಆಗಮೇತರ ಗ್ರಂಥ ಭಾಷೆ ಜೈನಮಹಾರಾಷ್ಟ್ರೀ ಪ್ರಭೇದದಲ್ಲಿದೆ. ಮೂರನೆಯ ಶತಮಾನದಿಂದ ಹೇಮಚಂದ್ರನ ತರುವಾಯದ ಕಾಲದ ತನಕ, ಈ ಪ್ರಭೇದದಲ್ಲಿ ಜೈನಕವಿಗಳು ಹಲವಾರು ಪುರಾಣ. ಚರಿತಗಳನ್ನು ಬರೆದಿದ್ದಾರೆ. ವಿಮಲಸೂರಿಯ (4ನೆಯ ಶತಮಾನ) ಪಉಮಚರಿಯದಲ್ಲಿ ಈ ಪ್ರಭೇದದ ಭಾಷೆ ಶುದ್ಧ ರೂಪವನ್ನುಳಿಸಿಕೊಂಡಿದೆ. ಸಂಘದಾಸನ ವಾಸುದೇವಹಿಂಡಿಯಲ್ಲೂ ಈ ಪ್ರಭೇದದ ಪ್ರಾಚೀನ ರೂಪವನ್ನು ಕಾಣಬಹುದು. ಅನೇಕ ಆಗಮಗ್ರಂಥಗಳ ಮೇಲೆ ಬರೆದ ನಿರ್ಯುಕ್ತಿಗಳ ಭಾಷೆ ಕೂಡ ಇದೇ ಆಗಿದೆ. ಹರಿಭದ್ರನ (8ನೆಯ ಶತಮಾನ) ಸಮರಾಇಚ್ಛಕಹಾ. ಗುಣಚಂದ್ರನ ಮಹಾವೀರಚರಿಯ, ಜಿನಪ್ರಣ ಸೂರಿಯ (13ನೆಯ ಶತಮಾನ) ತೀರ್ಥಕಲ್ಪದ ಕೆಲಭಾಗ ಈ ಭಾಷೆಯಲ್ಲಿ ರಚಿತವಾಗಿವೆ. ಕಕ್ಕೂತನೆಂಬ ದೂರ ಜಿನಮಂದಿರವೊಂದನ್ನು ಕಟ್ಟಿಸಿದುದರ ಬಗ್ಗೆ ಜೋಧಪುರದ ಹತ್ತಿರವಿರುವ ಘಟಿಯಾಲ ಎಂಬ ಹಳ್ಳಿಯಲ್ಲಿ ಈ ಪ್ರಭೇದದಲ್ಲಿ ರಚಿಸಿರುವ ಒಂದು ಶಾಸನ ಸಿಕ್ಕಿದೆ.

	ಮಹಾರಾಷ್ಟ್ರೀ ಪ್ರಾಕೃತ ಮಹಾರಾಷ್ಟ್ರದ ಭಾಷೆಯಾಗಿತ್ತು. ಎಂಬುದಾಗಿ ಅಲಂಕಾರಿಕ ದಂಡಿ ಹೇಳಿದ್ದಾನೆ. ಕುತೂಹಲಕವಿ ತನ್ನ ಲೀಲಾವಈ ಕಾವ್ಯದ ಭಾಷೆ ಮರಹಟ್ಟದೇಸೀ ಭಾಷಾ ಎಂಬುದಾಗಿ ಹೇಳಿಕೊಂಡಿದ್ದಾನೆ. ಆದ್ದರಿಂದ ಈ ಪ್ರಭೇದ ಅಂದಿನ ಮಹಾರಾಷ್ಟ್ರದ ಪ್ರಾಕೃತದಿಂದಲೇ ಮರಾಠೀ ಭಾಷೆ ಹುಟ್ಟಿದೆಯೆಂದು ಗ್ರಿಯರ್ ಸನ್ ಎಂಬ ಭಾಷಾವಿಜ್ಞಾನಿ ಅಭಿಪ್ರಾಯಪಟ್ಟಿದ್ದಾನೆ
	(ಎ.ಎನ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ